ಒಂದು ಗ್ರಾಮದಲ್ಲಿ ರಾಂಸ್ವರೂಪ್‌ಠಾಕೂರ್ ಎಂಬ ಒಬ್ಬ ಧನಿಕನಿದ್ದನು. ಅವನ ಪತ್ನಿಯು ಒಂದು ಹೆಣ್ಣು ಶಿಶುವಿಗೆ ಜನ್ಮವಿತ್ತು ಕಣ್ಣುಮುಚ್ಚಿ ಕೊಂಡುದರಿಂದ ಅತ್ಯಂತ ದುಃಖಿತನಾದನು. ಕ್ರಮೇಣ ಆ ಹಸುಗೂಸಿನ ಮುಖವನ್ನು ನೋಡಿ ಕೊಂಡು ಪತ್ನಿಯ ವಿಯೋಗದ ದುಃಖವನ್ನು ಮರೆಯಲು ಯತ್ನಿಸಿದನು. ಠಾಕೂರನು ಮುದ್ದು ಸೂಸುವ ತನ್ನ ಮಗಳಿಗೆ ಚಮೇಲೀ ಎಂದು ಹೆಸರಿಟ್ಟು ಅತಿ ಪ್ರೀತಿಯಿಂದ ಬೆಳೆಸ ತೊಡಗಿದನು.
ಚಮೇಲಿಯು ಆ ಗ್ರಾಮದಲ್ಲೇ ಎಲ್ಲರಿ ಗಿಂತಲೂ ತುಂಬಾ ಸುಂದರಳಾಗಿದ್ದಳು. ಆದರೆ, ತಂದೆಯ ಆಶ್ರಯದಲ್ಲಿಯೇ ಬೆಳೆದುದರಿಂದಲೋ ಅಥವಾ ಅತಿ ಮುದ್ದಿನಿಂದ ನೋಡಿ ಕೊಳ್ಳುತ್ತಿದ್ದುದ ರಿಂದಲೋ ಏನೋ ಹೊರ ಪ್ರಪಂಚವನ್ನೇ ಅರಿಯದ ಮುಗ್ಥಳಾಗಿ ಬೆಳೆದು ಸೂಕ್ತ ವಯಸ್ಕಳಾದಳು. ತನ್ನ ಅಂದಚಂದಗಳನ್ನು ನೋಡಿ, ಎಂತಹ ದೊಡ್ಡ ವ್ಯಕ್ತಿಯಾದರೂ ಸರಿಯೇ, ತಾನು ಬಯಸಿದವರು ಖಂಡಿತ ಮದುವೆಯಾಗುತ್ತಾರೆಂದು ಸ್ನೇಹಿತೆಯರು ಹೇಳುತ್ತಿದ್ದುದನ್ನು ಕೇಳಿ ಅತ್ಯಂತ ಸಂತೋಷ ಹೊಂದುತ್ತಿದ್ದಳು.
ಆ ಕಾಲದಲ್ಲಿ ಕ್ಷೌರಿಕರಿಗೆ ಗ್ರಾಮದಲ್ಲಿರುವ ಎಲ್ಲ ಯುವಕರ ಪರಿಚಯವೂ ಚನ್ನಾಗಿರುತ್ತಿತ್ತು. ಅವರ ಬಗ್ಗೆ ಎಲ್ಲ ವಿವರಗಳೂ ತಿಳಿದಿರುತ್ತಿದ್ದಿತು. ಆದ್ದರಿಂದ ಧನಿಕನು ಒಂದು ದಿನ ಆ ಗ್ರಾಮದ ಕ್ಷೌರಿಕನನ್ನು ಕರೆದು, ತನ್ನ ಮಗಳಿಗೆ ಸರಿಯಾದ ವರನನ್ನು ಸೂಚಿಸಲು ಹೇಳಿದನು.
ಅಡುಗೆ ಮನೆಯಲ್ಲಿ ರೊಟ್ಟಿಯನ್ನು ಬೇಯಿಸುತ್ತಿದ್ದ ಚಮೇಲಿಯು ಅವರ ಮಾತು ಗಳನ್ನು ಕೇಳಿಸಿ ಕೊಂಡಳು. ತಕ್ಷಣವೇ ಹೊರ ಬಂದು, ‘‘ಅಪ್ಪಾ ನಾನು ಗ್ರಾಮದಲ್ಲಿ ಎಲ್ಲರಿ ಗಿಂತಲೂ ಶಕ್ತಿವಂತನಾದವನನ್ನೇ ಮದುವೆ ಯಾಗುವುದು. ಸಾಧಾರಣ ಮನುಷ್ಯನನ್ನು ಮಾಡಿಕೊಳ್ಳುವುದಿಲ್ಲ’’ ಎಂದಳು.
ಆ ಮಾತಿಗೆ ತಂದೆಯೂ, ಕ್ಷೌರಿಕನೂ ಅತ್ಯಾಶ್ಚರ್ಯ ಗೊಂಡರು. ಒಬ್ಬಳು ಯುವತಿಯು ತನ್ನ ಮದುವೆಯ ವಿಷಯದಲ್ಲಿ ಇಷ್ಟು ಬಹಿರಂಗ ವಾಗಿ ಅಭಿಪ್ರಾಯವನ್ನು ತಿಳಿಸುವುದು ಅವರಿಗೆ ವಿಚಿತ್ರವಾಗಿ ತೋರಿತು.
‘‘ಯುವತಿಯರು ತಮ್ಮ ಮದುವೆಯ ಬಗ್ಗೆ ಹೀಗೆ ಮಾತಾಡಬಾರದು ತಾಯೀ. ನಿನಗೆ ಎಲ್ಲಾ ರೀತಿಯಲ್ಲೂ ತಕ್ಕವನನ್ನೇ ನೋಡುತ್ತಿದ್ದೇನೆ. ನೀನು ಒಳಕ್ಕೆ ಹೋಗು’’ ಎಂದು ಸೂಕ್ಷ್ಮವಾಗಿ ಖಂಡಿಸಿದನು ತಂದೆಯು.
|