ipad/iphonetopBanner

ಕಥೆಗಳು

ವರಕವಿ ದ.ರಾ. ಬೇಂದ್ರೆ

ಲೇಖಕ: ವಾಣೀಶ | 8th Dec, 2009


ಭರತಮಾತೆಯ ಕೋಟಿ ಕಾರ್ತಿಕೋತ್ಸವದಲ್ಲಿ
ಮಿನುಗುತಿಹ ಜ್ಯೋತಿ ನಾನು !
ಕನ್ನಡದ ತಾಯಿ ತಾವರೆಯ ಪರಿಮಳವುಂಡು
ಬೀರುತಿಹ ಗಾಳಿ ನಾನು !

 

ಎಂದೇ ತನ್ನನ್ನು ಪರಿಗಣಿಸಿಕೊಂಡು, "ಸರಸ ಜನನ, ವಿರಸ ಮರಣ, ಸಮರಸವೇ ಜೀವನ" ಎಂದು ಜೀವನ ತತ್ವ ಸಾರಿದ, ಬರಡು ಹೃದಯದಲ್ಲೂ ಪ್ರೇಮ-ಪ್ರೀತಿಯ ಅಲೆಗಳನ್ನು ಚಿಮ್ಮಿಸಬಲ್ಲ, ನೊಂದು ಬೆಂದ ಜೀವಿಯಲ್ಲಿ ಉತ್ಸಾಹದ ಚಿಲುಮೆ ಉಕ್ಕಿಸಬಲ್ಲ, ನವಿರಾದ ಪದಗಳೊಂದಿಗೆ ಸಾಂತ್ವನ ನೀಡಬಲ್ಲ ಕವಿತೆಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿದ ಧೀಮಂತ ಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ. ಕನ್ನಡ ಕಲೆ ಮತ್ತು ಸಾಹಿತ್ಯ ಲೋಕದ ಹೆಗ್ಗುರುತು ಆಗಿ ಪ್ರಖ್ಯಾತವಾಗಿರುವ ಧಾರವಾಡ ಮಣ್ಣಿನಿಂದ ಅರಳಿ ಬೆಳಗಿದ ಒಂದು ಪ್ರತಿಭೆ.

 

ಸಾಧನಕೇರಿಯ ಸಾಧಕರಾಗಿ ಕನ್ನಡದ 'ವರಕವಿ'ಯಾಗಿ ಕನ್ನಡ ನಾಡಿನ ಪ್ರತಿಯೊಬ್ಬರ ಹೃದಯದಲ್ಲೂ ವಿಶೇಷವಾದ ಸ್ಥಾನ ಪಡೆದಿದ್ದಾರೆ ಬೇಂದ್ರೆ ತಮ್ಮ ಅತ್ಯದ್ಭುತ ಕವನಗಳಿಂದ. ಬೇಂದ್ರೆ ಅವರ 'ನಾಕು ತಂತಿ' ಕವನ ಸಂಕಲನವು ಸಾಹಿತ್ಯ ಲೋಕದ ಅಗ್ರಗಣ್ಯ ಪ್ರಶಸ್ತಿ ಜ್ಞಾನಪೀಠವೇ ಅವರನ್ನರಸಿಕೊಂಡು ಬರುವಂತೆ ಮಾಡಿತು.

 

ಶೈಲಿ ಸರಳವಾದರೂ ಅದರೊಳಗೆ ಸಂಕೀರ್ಣವಾದ ಅರ್ಥ ಅಡಗಿರುತ್ತದೆ ಎಂದು ದಾಸವರೇಣ್ಯರಾದ ಪುರಂದರ ದಾಸರ ಪದಗಳನ್ನು ವ್ಯಾಖ್ಯಾನಿಸಲಾಗುತ್ತದೆ. ಜ್ಞಾನಪೀಠ ಪ್ರಶಸ್ತಿ ವಿಜೇತ ಕವಿ 'ಅಂಬಿಕಾತನಯದತ್ತ' ಕಾವ್ಯನಾಮದ ದ.ರಾ. ಬೇಂದ್ರೆಯವರ ಕವನದ ಸೊಗಸೂ ಇದೇ ನಿಲುವು ಉಳ್ಳದ್ದು.

 

"ಬಾರೋ ಸಾಧನಕೇರಿಗೆ ಮರಳಿ ನಿನ್ನೀ ಊರಿಗೆ", ಘಮ ಘಮ ಗಮಾಡಸ್ತಾವ ಮಲ್ಲಿಗಿ, ನೀವು ಹೋಂಟೀರಿ ಈಗ ಎಲ್ಲಿಗಿ.. ಇವು ವರಕವಿಯೆಂದೇ ಪ್ರೀತಿಯಿಂದ ಕರೆಯಲ್ಪಡುವ ಬೇಂದ್ರೆಯವರ ಅತ್ಯಂತ ಜನಜನಿತವಾದ ಕವನಗಳು. ಮನೋಜ್ಞವಾದ ಕವನಗಳ ಮೂಲಕ, ಎಂದಿಗೂ ವಾಸ್ತವತೆಗೆ ತೀರಾ ಹತ್ತಿರವಾಗುವಂತೆ ತಮ್ಮ ಪದ ಶ್ರೀಮಂತಿಕೆಯನ್ನು ಹೆಕ್ಕಿ ಹೆಕ್ಕಿ ಚುಕ್ಕಿ ಇರಿಸುತ್ತಾ ಕವನ ಕಟ್ಟುವ ಅವರ ಪರಿ ಮನಸ್ಸಿಗೇ ತಟ್ಟುತ್ತದೆ.


ಸಂಬಂಧಿತ ಕಥೆಗಳು

Customer Help Nos
BannerBanner